ಅಬ್ದುಲ್ ಅಜೀಜ್
	ತುರ್ಕಿಯ ಆಟೊಮನ್ ಸುಲ್ತಾನ ಎರಡನೆಯ ಮಹಮೂದನ ದ್ವಿತೀಯ ಪುತ್ರ (1830-1876). ಅಣ್ಣ ಅಬ್ದುಲ್ ಮಜೀದನ ತರುವಾಯ 1861ರಲ್ಲಿ ಸುಲ್ತಾನನಾದ. ಸಿರಿಯ, ಬಾಲ್ಕನ್ ಪರ್ಯಾಯದ್ವೀಪ, ಕ್ರೀಟ್ ಮುಂತಾದ ಪ್ರಾಂತಗಳಲ್ಲಿ ಉಂಟಾಗಿದ್ದ ಗಲಭೆಗಳನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳ ಸಹಾಯದಿಂದ ಅಡಗಿಸಿದ. ಪಾಶ್ಚಾತ್ಯ ರಾಷ್ಟ್ರಗಳ ಆಚಾರ, ಪದ್ಧತಿ, ಸಂಪ್ರದಾಯಗಳನ್ನು ತುರ್ಕಿಯಲ್ಲೂ ಹರಡಲು ಬಹುವಾಗಿ ಶ್ರಮಿಸಿದ. ತುರ್ಕಿಯಲ್ಲಿ ಒಂದು ರಾಜ್ಯಮಂತ್ರಾಲೋಚನಸಭೆ ನಿರ್ಮಿತವಾಯಿತು; ರಾಷ್ಟ್ರೀಯ ಪ್ರೌಢ ವಿದ್ಯಾಶಾಲೆಯೊಂದು ಸ್ಥಾಪಿತವಾಯಿತು. ವ್ಯವಹಾರ ಧರ್ಮಶಾಸ್ತ್ರವೊಂದು ರಚಿತವಾಯಿತು. ಆದರೆ ಇವನು ಅಳತೆಗೆಟ್ಟ ದುಂದುಗಾರ. ತುರ್ಕಿಯ ಅಧೀನದಲ್ಲಿದ್ದ ಬಲ್ಗೇರಿಯ ಬಾಸ್ನಿಯ ಮುಂತಾದ ಕೆಲವು ಐರೋಪ್ಯ ಪ್ರಾಂತಗಳಲ್ಲಿ ಜನ ತುರ್ಕಿಗೆ ವಿರೋಧವಾಗಿ ದಂಗೆಯೆದ್ದಾಗ, ಬೇಸರಗೊಂಡ ತುರ್ಕಿಯ ಪ್ರಜೆಗಳು ಅವನನ್ನು 1876ರಲ್ಲಿ ಪದಚ್ಯುತನನ್ನಾಗಿ ಮಾಡಿದರು. ಇದಾದ ನಾಲ್ಕು ದಿನಗಳಲ್ಲೇ ಆತ ಮೃತಹೊಂದಿದ.				
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ